ಆ ಬಾನಿನೂರಿಂದ ಚಂದಿರನು ಬಂದಿಹನು
ಹೂ ಬೆಳಕ ತಂದಿಹನು ಚೆಲುವೆ
ಮುನಿಸು ಏತಕೆ ಗೆಳತಿ, ಒಡೆಯಬಾರದೆ ಮೌನ
ಈ ಬಗೆಯ ಹುಸಿಕೋಪ ತರವೆ?
 
ಬಗೆಬಗೆಯ ಕನಸಿರಲು ಹೂವಂಥ ಮನಸಿರಲು 
ಬಾಡಿತೇತಕೆ ಜಾಜಿ ಬಳ್ಳಿ 
ಮುನಿಸು ಚಿಗುರಿತು ಹೇಗೆ ಭಾವ ಮುದುಡಿತು ಹೇಗೆ ?
ಸಮರಸಕೆ ವಿರಸವೇ ಕೊಳ್ಳಿ
 
ಈಗ ಚಂದಿರನಿಲ್ಲ  ಮೋಡ ಮುಸುಕಿದೆಯಲ್ಲ
ತಂಗಾಳಿಯೇಕಿನ್ನು ಬರದು?
ಒಮ್ಮೆ ಬಂದರೆ ಸಾಕು ಮುಗಿಲನಾಚೆಗೆ ನೂಕು
ಈ ಬಾನು ಎಷ್ಟೊಂದು ಹಿರಿದು ?
 
ಹುಣ್ಣಿಮೆಯ ಬೆಳಕಿಗೆ ತಂಗಾಳಿ ಅಲೆಅಲೆಗೆ 
ಕಾದಿರುವೆ ಕನಸ ಹಾಗೆ 
ಯಾಕೆ ಈ ತರ ಹಗಲು ಬರಿಯ ಶಾಖದ ಒಡಲು
ಕಾಯುವೆನು ನಿನ್ನ ಹೂ ನಗೆಗೆ.
 
 
ISHWARA BHAT K
Advertisements