ಅಚಾನಕ್ಕಾಗಿ ಭೂಮಿಗೆ ಬಿದ್ದ ಬೀಜ..
ಪ್ರೀತಿ ತುಂಬಿದ ಕಪ್ಪು ಮಣ್ಣಿನ ಕಂಪು
ರೋಷ ತುಂಬಿದ ಮುಗಿಲಿಗೆ ತಂಪು ಗಾಳಿಯ ತೀಡಿ 
ಬರಸೆಳೆದು, ನನ್ನನ್ನು ಇಲ್ಲಿಯೇ ಬಚ್ಚಿಟ್ಟಿತು.
ನಾನಾದೆ ಮೂಕ , ಪ್ರೀತಿಯಪ್ಪುಗೆಗೆ ಸಿಲುಕಿ 
ಆ ಮಣ್ಣ ಕಂಪಲ್ಲಿ ಆ ಮುಗಿಲ ಕೆಂಪಿಂದ
ಉಸಿರೊಡೆದೆನು, ಹಾಗೆಯೇ ಹಸಿರೊಡೆದೆನು.
 
ಅದೆ ಮಣ್ಣು ಅದೆ ಮುಗಿಲು ಮತ್ತೆಯೂ ನನ್ನನ್ನು
ಪ್ರೀತಿಸಿತು ಬದುಕಿಸಿತು ಬೆಳೆಯಲಂತೆ.
ಬಾಗಿದರೆ ಸಣ್ಣ ಕೋಲೆತ್ತಿ ನಿಲಿಸಿದಳು 
ಪ್ರೀತಿ ತುಂಬಿದ ಗೀತೆ ಮತ್ತೆ ಮತ್ತೆ .
 
ಬಂದ ಬೇರುಗಳೆಲ್ಲ ಅಮ್ಮನಾ ಎದೆಯೊಳಗೆ 
ಆಳದಾಳಕೆ ಇಳಿದು ಸೇರಿಬಿಟ್ಟೆ .
ಕಾಂಡ ಬಲಿಯಿತು , ಹಳೆಯ ಕೊಳೆಗಳ ತೊಳೆದೆ 
ಮತ್ತೆ ಮುಗಿಲಿನ ಕಡೆಗೆ ನೋಟವಿಟ್ಟೆ.
 
ಬೇರು ಮಣ್ಣಲೇ ಬಿಟ್ಟು ಮೇಲೇಳುತಿಹೆ ನೋಡು 
ಅಲ್ಲೇ ಇರಬೇಕೆನ್ನ ಮುಂದಿನ ಮರೆ.
ಗಾಳಿ ಹೊಯ್ದಾಡಿದರೆ ನಾನು ಹೊಯ್ದಾಡುವೆನು
ಕೇಳಲಾರೆನು ಮತ್ತೆ ಕೋಲಿನ ಸೆರೆ .
 
ಮಣ್ಣು ಬಯಸಿತು ಪ್ರೀತಿ ಮುಗಿಲಂತೆ ಮಳೆಯಂತೆ 
ಈ ಮರವು ನನಗಿನ್ನು ನೆರಳಾಗಲಿ.
ನನ್ನ ಸತ್ವದ ಫಲವ ಬೇರುಗಳ ಮೂಲಕವೇ
ಹೀರಿದುದು ಸಾಕಿನ್ನು ಕೊನೆಯಾಗಲಿ. 
 
ನನಗೋ ಬೆಳೆಯುವ ಆಸೆ ಮಣ್ಣೇನು ಮುಗಿಲೇನು 
ನಾನು ಬೆಳೆಯುವೆ ನಿಮ್ಮ ಹೀರಿಕೊಂಡೇ.
ನನಗೊಂದು ಕನಸುಂಟು ಆ ಮುಗಿಲ ಧರೆಗೆಳೆದು 
ಇರಿಸುವೇನು ಇಲ್ಲಿಯೇ ಓಡದಂತೆ.
 
ನನಗೀಗ ಹೊಸ ಹುರುಪು ತುಂಬೆಲ್ಲ ಹೊಸ ಚಿಗುರು 
ಮತ್ತೆಯೋ ನಾಳೆಯೋ ಹೊಸ ಹೂಗಳು .
ಕಾಯಿಗಳ ಹಣ್ಣುಗಳ ಉದುರಿಸುವೆ ನಿನಗಾಗಿ 
ನೀ ಬೆಳೆಸು, ಮತ್ತೆ ಕರೆ ಪ್ರೀತಿ ಮುಗಿಲು .
 
ನೀ ಕೊಟ್ಟೆ ನಾ ಬೆಳೆದೆ, ನಾ ಕೊಡದೆ ನೀ ಬೆಳೆವೆ 
ನಿನಗೇನೂ ಹೊರೆಯಲ್ಲ ಈ ನೊಗಗಳು
ಮತ್ತೆ ಚಕ್ರವ ತಿರುಗಿ, ಮತ್ತೆ ಪ್ರೀತಿಗೆ ಕರಗಿ 
ನಾ ಬಾರೆ ನಿನ್ನಲ್ಲಿ ಮಗುವಾಗಲು ..
 
ನಾ ಬಾರೆ ನಿನ್ನಲ್ಲಿ ಮಗುವಾಗಲು ..     
 
ISHWARA BHAT K
೧೮-೦೬-೨೦೦೭
Advertisements