ಅವಳೊಲವು ಕಡಲಲ್ಲ ಬರೆ ಹರಿವ ನೀರು
ಮರೆತು ಬಿಡು ನೀನೆಳೆದ ಪ್ರೇಮದಾ ತೇರು
 
ಮಾವು ಪ್ರೀತಿಯ ಕರೆಗೆ ಬೇವು ಬೆರಸಿದೆ ವಿರಸ
ಹರಿಸಿದೆಯ ಕಣ್ಣೀರ ಕೋಡಿ ಮಳೆಯ .
ಇಲ್ಲಿ ಒಲವೀಗಿಲ್ಲ, ಮರೆಸುವುದು ಸಿಹಿ ಬೆಲ್ಲ
ಏಕೆ ಕಾಯುವೆ ನೀನು ಎಲ್ಲ ಸಮಯ ?
 
ಮನಸು ಕನ್ನಡಿ ಹಾಗೆ, ಒಡೆದು ಹೋಗಿದೆ ಬಿಂಬ
ಯಾಕಿಟ್ಟೆ ಎದೆಗೂಡ ಚಿಪ್ಪಿನೊಳಗೆ ?
ನಿನ್ನೊಲವ ಹಾದಿಯನು ಅವಳೆ ಮರೆತಿಹ ಮೇಲೆ
ಹಿತವಿಹುದೆ ಕಾಯುವಾ ಪ್ರೀತಿಯೊಳಗೆ ?
 
ಹಗಲು ಅರಳಿದ ಹೂವು ಅದೆ ಸಂಜೆ ಬಾಡುವುದು
ಪ್ರೇಮ ಅಮರವೆ ಹೇಳು ಬಾಳಿನಲ್ಲಿ ?
ನಿನ್ನ ನಲಿವನೆ ಕಿತ್ತು ನೋವ ಮುಳ್ಳಿರಿಸಿದ
ಆ ಪ್ರೇಮ ಮರೆತುಬಿಡು ನೋವಿನಲ್ಲಿ .
 
ಹರಿವ ನೀರದು ಮತ್ತೆ ಸಾಗರವ ಸೇರುವುದು
ಪ್ರೀತಿ ಬದುಕಿನ ಬದುಕು , ಪ್ರೀತಿಯೊಂದೇ.
ನಿನ್ನ ಕಾಯುವ ಕನಸು ವ್ಯರ್ಥವಾಗದೆ ಇರಲಿ
ಫಲಿಸಲಿ ನನ್ನೆದೆಯ ಹರಕೆಯಿಂದೇ .
 
ISHWARA BHAT K
೩೧-೦೧-೨೦೦೫
Advertisements