ಕತ್ತಲ ಹಾಡುಗಳು !!! ಬುಧವಾರ, ಜನ 27 2010 

ನಿಮ್ಮ ಪಾಡಿಗೆ ನೀವಿದ್ದರೂ..
ಈ ಕತ್ತಲು ನಿಮ್ಮನ್ನ ಕಾಡುತ್ತದೆ ..

 

ನಿಘೂಢ ಆಕಾಶದ ಕಪ್ಪಿನ ಬೆಳಕನ್ನು
ಭೇದಿಸುತ್ತಾ ನೆಗೆದ ಹೂಬಾಣಉರಿದು ಬೀಳುವಾಗ
ಮೇಲ್ನೋಡುತ್ತ ನಿಂತ ಮುಖ ಕಪ್ಪಾಗಿತ್ತು !!

 

ಕತ್ತಲ ಮಳೆಹನಿಗೆ ಎಲ್ಲವೂ ಕಪ್ಪಾಗಿದೆ
ಆದರೆ ಇಲ್ಲೊಬ್ಬ ಹೊಳೆಯಿತ್ತಿದ್ದಾನೆ.
ಇಂದು ಹಚ್ಚಿದ ಬಣ್ಣ ತೊಳೆಯದೇ
ನಾಳೆಗೆ ಕಾಯ್ದಿರಿಸಿದ್ದಾನೆ

 

“ನಿನ್ನನ್ನು ನಾನು ಚೆನ್ನಾಗಿ ಬಲ್ಲೆ ” ಎಂದಾತನಿಗೆ
ಒಬ್ಬ ಕೇಳಿದನಂತೆ …” ನಿನ್ನೆ ರಾತ್ರಿ ನಾನೇನು ಕನಸು ಕಂಡೆ ” ?

 

ಈ ಕತ್ತಲೆನ್ನುವುದು ಒಂದು ಬಿಂದು .
ಸಹಜವಾಗಿದ್ದಷ್ಟೂ ನಾವು ಬಿಂದು ಚಿಕ್ಕದಾಗಿರುತ್ತದೆ..

 

ಈ ಕತ್ತಲೆನ್ನುವುದು ಎಷ್ಟು ದೀರ್ಘವಿದೆ ಗೊತ್ತೇ ?
ಇಂದೊಂದು ಕಳೆಯಲಿ ಹೇಳುವೆನು ಮತ್ತೆ !!

 

ISHWARA BHAT K

Advertisements

ನೀ ಹೋದೆ ಮರೆಯಾದೆ ನನ್ನ ಮರೆತು.. ಶನಿವಾರ, ಜನ 16 2010 

ನೀ ಹೋದೆ ಮರೆಯಾದೆ ನನ್ನ ಮರೆತು
ಈ ನೋವ ಹಾಡಲಿದೆ ನಿನ್ನ ಗುರುತು
 
ಎಲ್ಲ ಬಿಳಿಯಲೆ ಬರೆದ ಎದೆ ಚಿತ್ರಪಟದಲ್ಲಿ
ಇಟ್ಟೆಯಾ ನೀ ನೋವ ಕಪ್ಪು ಚುಕ್ಕಿ 
ನೀನು  ಕರೆದರೆ ಬರುವ ಆನಂದಭಾಷ್ಪವನು 
ಮರೆತು  ಅಳುತಿಹೆ ನಾನು ಬಿಕ್ಕಿ ಬಿಕ್ಕಿ  
 
ಬಿಟ್ಟೆನ್ನ ಹೋದರೂ ನೆನಪ ಮಂಥನದೊಳಗೆ
ನೀ ಬರುವ ಆಸೆಗಳು ಹುಟ್ಟಿ
ಸಾಯುವವು ವಾಸ್ತವಕೆ ನಾನೇ ಹೊರೆಯಾಗಿರಲು
ಕನಸೆಲ್ಲ ಬರಿದಾಗಿ ಬತ್ತಿ
 
ಏನಾದರಾಗಲಿ ಸಾಗಲಾರೆನೆ ನಾನು ?
ಅಳಿಸಲಾಗದೆ ನಿನ್ನ ಪ್ರೀತಿ ಕಿಡಿಯ ?
ಮತ್ತೆನ್ನ ಕೂಗದಿರು; ನಾ ಬಾರೆ ನಿನ್ನಿದಿರು
ಜೇನಾಗಲಿ ನಿನ್ನ ಹೂವ ಹೃದಯ   
ಜೇನಾಗಲಿ ನಿನ್ನ ಹೂವ ಹೃದಯ  ……
 
ISHWARA BHAT K

ಚೆಲುವು ಬಂದು ಕರೆಯಿತೆನ್ನ ಶನಿವಾರ, ಜನ 16 2010 

ಚೆಲುವು ಬಂದು ಕರೆಯಿತೆನ್ನ

ಒಲುಮೆ ಮಾತಿಗೆಳೆಸಿತೆನ್ನ

ಹಾಡು ಹೂವು ಹನಿಗಳೆಲ್ಲ

ಇಲ್ಲಿ ಒಲವ  ಚಿತ್ರವೇ

ಎದೆಯ ಭಾವ ಮಾತ್ರವೇ

 

ಅಲ್ಲಿ ಇಲ್ಲಿ ಚಪ್ಪರದಲಿ

ತಬ್ಬಿ ಬೆಳೆದ ಮಲ್ಲೆ ಬಳ್ಳಿ

ಹಿಡಿಯ ತುಂಬಾ ಬಿಳಿಯ ಹೂವ

ನೀನು ತಂದ ದಿನವನು

ಹೇಗೆ ನಾನು ಮರೆವೆನು?  

 

ತಂಗಾಳಿಗೆ ಮೋಡವುದುರಿ

ಸೊಗದ ಸೋನೆ ಹನಿಗಳುದುರಿ

ಸಗ್ಗ ಭುವಿಗೆ ತಂದ ಸೊಗಸ

ಹೇಗೆ ನಾನು ಪಡೆಯಲಿ

ನೀನು ಇರದ ದಿನದಲಿ ?

 

ಎಲ್ಲೋ ಕೇಳಿ ಮರೆತು ಹೋದ

ಹಾಡ ಮತ್ತೆ ಎದೆಗೆ ತಂದ

ನಿನ್ನ ಒಲವ ರಾಗಕೀಗ

ನನ್ನ ಕವಿತೆ ನೀಡುವೆ

ಎಂದೂ ನಲಿವ ಬಯಸುವೆ

 

ISHWARA BHAT K

ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ ಗುರುವಾರ, ಜನ 14 2010 

ಅವಳಿಲ್ಲದಿರುವಾಗ ಕನಸುಗಳು ಬಲೆಯಂತೆ

ಸುತ್ತುವರಿಯುತ ಅವಳ ಕಾಣಿಸುವುದು

ಅವಳೆದುರು ಬಂದಾಗ ಮಾತಿರದೆ ಮೌನದಲಿ

ಕಣ್ಣ ನೀಲಿಯೇ ನನ್ನ ಮೀಯಿಸುವುದು

ಮಾತಿನೋಲೆಗಳೆಲ್ಲ ಅವಳೊಂದು ನಗೆಯಲ್ಲಿ

ಮರೆತು ಹೋಗುವುದೆನ್ನ ಕನಸ ಬುತ್ತಿ

ಬೇಸರವೇ ಜಾರುವುದು ಅವಳ ಸಾಮೀಪ್ಯದಲಿ

ಮತ್ತೆ ಬರುವುದು ಕನಸು ಸುತ್ತಿ ಸುತ್ತಿ

ನಿಜವಾದ ಚೆಲುವನ್ನು ಹೊಗಳಲಾರದೆ ನಾನು

ಮರುಗುವೆನು ಅವಳಿರುವ ಎಲ್ಲಾ ಕ್ಷಣವು

ಜಲದ ನಾದದ ದನಿಯು ನನ್ನೆದುರು ಕುಣಿವಾಗ

ಎಲ್ಲಿಯೋ ಅಡಗುವುದು ನನ್ನ ಸ್ವರವು

ಹಾದಿಯಲಿ ನಡೆವಾಗ ಅವಳ ಹೆಜ್ಜೆಯ ಹುಡುಕಿ

ಹೋಗುವುದು ಅವಳಿರದ ವೇಳೆಯಲ್ಲಿ

 ಜೊತೆಯಲ್ಲಿ ಇರುವಾಗ ಹೇಗೆ ನಡೆಯಲಿ

ನಾನು ಹಿಂದೆ ನಡೆವೆನು ಸೋತ ಭಾವದಲ್ಲಿ

ISHWARA BHAT K

« ಹಿಂದಿನ ಪುಟ