ಸ್ವಲ್ಪ ಬದಲಾವಣೆ ಅಷ್ಟೆ ಮಂಗಳವಾರ, ಜನ 18 2011 

http://bhavakirana.blogspot.com/ ತುಂಬಾ ಸುಲಭವಾಗಿ ಬರೆಯಲು ಸಾಧ್ಯ ಆಗುವುದರಿಂದ ಇಲ್ಲಿಂದ ಹೆಚ್ಚಾಗಿ ಅಲ್ಲೇ ಬರೆಯುವುದು ..

Advertisements

ನಾನೊಂದು ಮುತ್ತಲ್ಲ ಬರಿ ಹೊಳೆವ ಕಲ್ಲು ! ಮಂಗಳವಾರ, ಮೇ 25 2010 

ನಾನೊಂದು ಮುತ್ತಲ್ಲ  ಬರಿ ಹೊಳೆವ ಕಲ್ಲು !

ಸಾವಿರ ಸಾವಿರ ಮುತ್ತು ಸಿಗುವುದು ಸಾಗರದಾಳದಲ್ಲಿ
ನನ್ನೇ ಏಕೆ ಆರಿಸಿದೆ ಮೋಹದ ಆತುರದಲ್ಲಿ ?

ಹೊಸ ಮುತ್ತ ಹುಡುಕಿನ್ನು ಹಳೆ ಕಲ್ಲ ಕಳೆದು
ಆಗದೀ ಸಾಗರವು ಎಂದಿಗೂ ಬರಿದು

ಹುಡುಕಾಡಿ ದಣಿದರೇ ಬಾ ಎನ್ನ ಕಡೆಗೆ
ಕಲ್ಲಾಗಿ ಇರಲಾರೆ ನಾ ಕೊನೆಯವರೆಗೆ

Ishwara Bhat K
Date : 20-05-2010, Thursday

ಮೂರು ಲೋಕ ಶುಕ್ರವಾರ, ಮಾರ್ಚ್ 19 2010 

೧. ಸುಳಿವ ಗಾಳಿ ಹೂಗಂಧ ಒಳ ಹೊರಗೆ
ಹಿಮಪಾತ ; ಎಳೆ ಬಿಸಿಲ ಕೊಡೆಯಾಸೆ.
ರುದ್ರಾಕ್ಷಿ ನೋಟ ಹದ್ದಿನ ಬೇಟೆ !
ಹೆಸರಿಡದ ಚಿತ್ರ ವಿಚಿತ್ರ ಆಕೃತಿ
ಬಹುಮುಖ ಪ್ರತಿಬೆ ಸಂತಾನ, ಹರಿದು ಹೋಗುವ ಭಾವ
ಅಂಬೆಗಾಲಿಟ್ಟು ನಡೆಯುವ ಮಗು .

೨.
ಸುತ್ತುವ ಗಾಳಿ , ಬಯಕೆ ಹೂ ಬಿಸಿಯೆದೆಗೆ
ಅರೆಗಟ್ಟಿದ ನೀರು, ಮೊಸರು; ಗೋಸುಂಬೆ 
ಬಾನ ನೀಲಿಯ ದೃಷ್ಟಿ , ಶೂನ್ಯದ ಕಾಟ  
ದೀರ್ಘ ಉಸಿರೆಳೆತದ ಹರಿವು 
ಹೆಸರಿಟ್ಟ ಭೂತದ ಮೂರ್ತಿ ; ಮುಖವಾಡ 
ಹೊರಳಿ ಮಿಡುಕುವ ತರುಣ .

೩.
ಒಡೆದ ದೀಪದ ಬಳಿ ಸುತ್ತುವ ಗಾಳಿ
ಮುಗಿದೂ ಮುಗಿಯದ ಎಣ್ಣೆ
ಆವಿ; ನಿಲ್ಲುವ ಮೋಡದ ಕನಸು
ಸಾರ್ಥಕ ನಿರರ್ಥಕ ನಿಚ್ಚಣಿಕೆಯ ಸಾಕಾರ
ನೂರು ಗೂಡಿನ ಹಕ್ಕಿ ಗರಿ ಉದುರಿ ಶೂನ್ಯ.
ಆಕಾಶದಾಚೆಯ ದೃಷ್ಟಿ ಹೊರಳುವ ಬಿಂಬ
ತೆರೆದ ಅವಕಾಶ ಕಾಯುವ ವೃಧ್ಧ.

ISHWARA BHAT K

೦೪.೦೨.೨೦೦೫

ಅವಳ ಪ್ರೀತಿಗೆ , ನನ್ನ ಬದುಕಿಗೆ ! ಸೋಮವಾರ, ಮಾರ್ಚ್ 15 2010 

 
೧. ಅವಳಿಗೆ
ಬಾಳ ಬಂಧನದ ಹೊರೆಗಾದೆ ನೀನು ನೊಗ
ಆಗಲಾರೆನು ನಾನು ನೊಗಕೆ ಹೊರೆಯು !!
 
೨. ಪ್ರೀತಿಗೆ
ಗುರಿಯಿರದೆ ಶರವೆಸೆದೆ !
ಮರಣ ತಪ್ಪಿತು , ಉಳಿಸಿಹೋಯಿತು ನೋವ
ಬಾರದೇ ಮರಳಿ ಬಾಣ ?!
 
೩.ನನಗೆ
ಮಾಸಿ ಹೋಗಿದೆ ನೆನಪು ಎಂದು
ಮೋಸಹೋಗಿದೆ ಮನಸು ,
ಮರೆತು ಮಲಗಿದೆ ಕನಸ ಗಾಯವು
ವಾಸಿಯಗದೆ ಉಳಿವೆ ಎಂದು !
 
೪. ಬದುಕಿಗೆ
ಕತ್ತಲನ್ನೇ ಸುಟ್ಟ ಬೆಳಕು
ಕಣ್ಣಿಗೆ ಬಿದ್ದಾಗ
ಬೆಳಕೇ ಸುಟ್ಟುಹೋಯಿತು.
 
ISHWARA BHAT K
೨೬.೦೭.೨೦೦೯  

ಒಂದು ಸತ್ಯ ಶನಿವಾರ, ಮಾರ್ಚ್ 13 2010 

ಒಂದು ಸತ್ಯ

ಒಂದು ತಿಂಗಳ ಹಿಂದೆ
ಆಕಾಶಯಾನದ ಕನಸು ಹೊತ್ತು ಇಲ್ಲಿಗೆ ಬಂದೆ .
ಇಲ್ಲೆ ದಾರಿಯಲ್ಲಿ ಡಿಕ್ಕಿ ಹೊಡೆದು ಕೆಳಗೆ ಬಿದ್ದೆ .
ಮರವೋ ಕಂಬವೋ ತಿಳಿಯಲಿಲ್ಲ .
ಈಗ ಭೂಮಿಯಲ್ಲಿ ನಡೆಯುವುದನ್ನು ಕಲಿಯುತ್ತಿದ್ದೇನೆ !!.
 
ISHWARA BHAT K
೨೩.೧೧.೨೦೦೬

ನಾನು ಮತ್ತು ಗಿಳಿ !! ಸೋಮವಾರ, ಮಾರ್ಚ್ 8 2010 

                        ೧

ಏನೋ ಕನಸಿನ ಹಿಂದೆ ಕೈಚಾಚುತ್ತಿದ್ದಾಗ
ಕಂಡೆ ನಾನೊಂದು ಗಿಳಿ ಕಿಟಕಿಯಲ್ಲಿ 
ಹಸುರುಟ್ಟ ಗದ್ದೆಯ ಬಣ್ಣ, ಕೆಂಪು ಕೊಕ್ಕು 
ಈ ಹಕ್ಕಿ ಎಸ್ಟೊಂದು ಚೆನ್ನ
ಪ್ರಕೃತಿದೇವಿಗೆ ನನ್ನದೊಂದು ನಮನ
 
ಅಷ್ಟು ಸ್ನೇಹಿಯೇ ನಾನು ?
ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಹಕ್ಕಿ
ಹೆದರದೇ ಕುಳಿತಿದೆಯಲ್ಲ
ಸವಿಯ ಭಾವವ ತುಂಬಿ ಹರಸುತ್ತಿದ್ದೇನೆ !!
                   
                       ೨
ಸರಿಯಾಗಿ ನೋಡಿದರೆ 
ಸಣ್ಣ ಮೆಣಸಿನ ಬೀಜ ಕೊಕ್ಕಂಚಿನಲ್ಲಿ 
ನಾನು ಸಾಕಿದ ಗಿಡದ್ದೇ ಇರಬೇಕು .!
ಹಾಳು ಹಕ್ಕಿ ! ಬಿಡಲೇಬಾರದು ಇದನು
ಕೈಗೆ ಸಿಕ್ಕಿದ್ದನ್ನೆಸೆದೆ 
 
ಹಾರಿಹೋಯಿತೆ ಗಿಳಿ ಛೆ !?
ಸರಿಯಾಗಿ ಬೀಳಬೇಕಿತ್ತು ಪೆಟ್ಟು 
ಇನ್ನೊಮ್ಮೆ ಬರಲಿ ಎಂದು 
ಕಲ್ಲು ಕೈಯೊಳಗಿಟ್ಟು ಕಾಯುತ್ತಿದ್ದೇನೆ !!
 
ISHWARA BHAT K
೨೦-೦೨-೨೦೦೫

ಭಗ್ನ ಪ್ರೇಮಿಗೆ !! ಶನಿವಾರ, ಮಾರ್ಚ್ 6 2010 

ಅವಳೊಲವು ಕಡಲಲ್ಲ ಬರೆ ಹರಿವ ನೀರು
ಮರೆತು ಬಿಡು ನೀನೆಳೆದ ಪ್ರೇಮದಾ ತೇರು
 
ಮಾವು ಪ್ರೀತಿಯ ಕರೆಗೆ ಬೇವು ಬೆರಸಿದೆ ವಿರಸ
ಹರಿಸಿದೆಯ ಕಣ್ಣೀರ ಕೋಡಿ ಮಳೆಯ .
ಇಲ್ಲಿ ಒಲವೀಗಿಲ್ಲ, ಮರೆಸುವುದು ಸಿಹಿ ಬೆಲ್ಲ
ಏಕೆ ಕಾಯುವೆ ನೀನು ಎಲ್ಲ ಸಮಯ ?
 
ಮನಸು ಕನ್ನಡಿ ಹಾಗೆ, ಒಡೆದು ಹೋಗಿದೆ ಬಿಂಬ
ಯಾಕಿಟ್ಟೆ ಎದೆಗೂಡ ಚಿಪ್ಪಿನೊಳಗೆ ?
ನಿನ್ನೊಲವ ಹಾದಿಯನು ಅವಳೆ ಮರೆತಿಹ ಮೇಲೆ
ಹಿತವಿಹುದೆ ಕಾಯುವಾ ಪ್ರೀತಿಯೊಳಗೆ ?
 
ಹಗಲು ಅರಳಿದ ಹೂವು ಅದೆ ಸಂಜೆ ಬಾಡುವುದು
ಪ್ರೇಮ ಅಮರವೆ ಹೇಳು ಬಾಳಿನಲ್ಲಿ ?
ನಿನ್ನ ನಲಿವನೆ ಕಿತ್ತು ನೋವ ಮುಳ್ಳಿರಿಸಿದ
ಆ ಪ್ರೇಮ ಮರೆತುಬಿಡು ನೋವಿನಲ್ಲಿ .
 
ಹರಿವ ನೀರದು ಮತ್ತೆ ಸಾಗರವ ಸೇರುವುದು
ಪ್ರೀತಿ ಬದುಕಿನ ಬದುಕು , ಪ್ರೀತಿಯೊಂದೇ.
ನಿನ್ನ ಕಾಯುವ ಕನಸು ವ್ಯರ್ಥವಾಗದೆ ಇರಲಿ
ಫಲಿಸಲಿ ನನ್ನೆದೆಯ ಹರಕೆಯಿಂದೇ .
 
ISHWARA BHAT K
೩೧-೦೧-೨೦೦೫

ನನ್ನ ಹಾಡು .. ಬುಧವಾರ, ಫೆಬ್ರ 24 2010 

ಅಚಾನಕ್ಕಾಗಿ ಭೂಮಿಗೆ ಬಿದ್ದ ಬೀಜ..
ಪ್ರೀತಿ ತುಂಬಿದ ಕಪ್ಪು ಮಣ್ಣಿನ ಕಂಪು
ರೋಷ ತುಂಬಿದ ಮುಗಿಲಿಗೆ ತಂಪು ಗಾಳಿಯ ತೀಡಿ 
ಬರಸೆಳೆದು, ನನ್ನನ್ನು ಇಲ್ಲಿಯೇ ಬಚ್ಚಿಟ್ಟಿತು.
ನಾನಾದೆ ಮೂಕ , ಪ್ರೀತಿಯಪ್ಪುಗೆಗೆ ಸಿಲುಕಿ 
ಆ ಮಣ್ಣ ಕಂಪಲ್ಲಿ ಆ ಮುಗಿಲ ಕೆಂಪಿಂದ
ಉಸಿರೊಡೆದೆನು, ಹಾಗೆಯೇ ಹಸಿರೊಡೆದೆನು.
 
ಅದೆ ಮಣ್ಣು ಅದೆ ಮುಗಿಲು ಮತ್ತೆಯೂ ನನ್ನನ್ನು
ಪ್ರೀತಿಸಿತು ಬದುಕಿಸಿತು ಬೆಳೆಯಲಂತೆ.
ಬಾಗಿದರೆ ಸಣ್ಣ ಕೋಲೆತ್ತಿ ನಿಲಿಸಿದಳು 
ಪ್ರೀತಿ ತುಂಬಿದ ಗೀತೆ ಮತ್ತೆ ಮತ್ತೆ .
 
ಬಂದ ಬೇರುಗಳೆಲ್ಲ ಅಮ್ಮನಾ ಎದೆಯೊಳಗೆ 
ಆಳದಾಳಕೆ ಇಳಿದು ಸೇರಿಬಿಟ್ಟೆ .
ಕಾಂಡ ಬಲಿಯಿತು , ಹಳೆಯ ಕೊಳೆಗಳ ತೊಳೆದೆ 
ಮತ್ತೆ ಮುಗಿಲಿನ ಕಡೆಗೆ ನೋಟವಿಟ್ಟೆ.
 
ಬೇರು ಮಣ್ಣಲೇ ಬಿಟ್ಟು ಮೇಲೇಳುತಿಹೆ ನೋಡು 
ಅಲ್ಲೇ ಇರಬೇಕೆನ್ನ ಮುಂದಿನ ಮರೆ.
ಗಾಳಿ ಹೊಯ್ದಾಡಿದರೆ ನಾನು ಹೊಯ್ದಾಡುವೆನು
ಕೇಳಲಾರೆನು ಮತ್ತೆ ಕೋಲಿನ ಸೆರೆ .
 
ಮಣ್ಣು ಬಯಸಿತು ಪ್ರೀತಿ ಮುಗಿಲಂತೆ ಮಳೆಯಂತೆ 
ಈ ಮರವು ನನಗಿನ್ನು ನೆರಳಾಗಲಿ.
ನನ್ನ ಸತ್ವದ ಫಲವ ಬೇರುಗಳ ಮೂಲಕವೇ
ಹೀರಿದುದು ಸಾಕಿನ್ನು ಕೊನೆಯಾಗಲಿ. 
 
ನನಗೋ ಬೆಳೆಯುವ ಆಸೆ ಮಣ್ಣೇನು ಮುಗಿಲೇನು 
ನಾನು ಬೆಳೆಯುವೆ ನಿಮ್ಮ ಹೀರಿಕೊಂಡೇ.
ನನಗೊಂದು ಕನಸುಂಟು ಆ ಮುಗಿಲ ಧರೆಗೆಳೆದು 
ಇರಿಸುವೇನು ಇಲ್ಲಿಯೇ ಓಡದಂತೆ.
 
ನನಗೀಗ ಹೊಸ ಹುರುಪು ತುಂಬೆಲ್ಲ ಹೊಸ ಚಿಗುರು 
ಮತ್ತೆಯೋ ನಾಳೆಯೋ ಹೊಸ ಹೂಗಳು .
ಕಾಯಿಗಳ ಹಣ್ಣುಗಳ ಉದುರಿಸುವೆ ನಿನಗಾಗಿ 
ನೀ ಬೆಳೆಸು, ಮತ್ತೆ ಕರೆ ಪ್ರೀತಿ ಮುಗಿಲು .
 
ನೀ ಕೊಟ್ಟೆ ನಾ ಬೆಳೆದೆ, ನಾ ಕೊಡದೆ ನೀ ಬೆಳೆವೆ 
ನಿನಗೇನೂ ಹೊರೆಯಲ್ಲ ಈ ನೊಗಗಳು
ಮತ್ತೆ ಚಕ್ರವ ತಿರುಗಿ, ಮತ್ತೆ ಪ್ರೀತಿಗೆ ಕರಗಿ 
ನಾ ಬಾರೆ ನಿನ್ನಲ್ಲಿ ಮಗುವಾಗಲು ..
 
ನಾ ಬಾರೆ ನಿನ್ನಲ್ಲಿ ಮಗುವಾಗಲು ..     
 
ISHWARA BHAT K
೧೮-೦೬-೨೦೦೭

ಒಂದು ನೀರವ ಸಂಜೆ….. ಶನಿವಾರ, ಫೆಬ್ರ 13 2010 

ಒಂದು ನೀರವ ಸಂಜೆ
ಮೋಡ ಚದುರಿದ ಗಗನ
ಕತ್ತಲೆಯ ಛಾಯೆಯಿದೆ ಬೆಳಕ ಹಿಂದೆ
ಮರದ ಗೂಡುಗಳಿಂದ
ಹಕ್ಕಿಗಳ ಉಲಿಯಿಲ್ಲ
ಬೇಸರದ ಭಾವವಿದೆ ಮನದ ಮುಂದೆ
 
ಎಲ್ಲೋ ಮಿಂಚಿನ ಬೆಳಕು
ಎಲ್ಲೋ ಮನಸಿನ ಅಳುಕು
ಬಾರನೇ ಶಶಿ ಇರುಳು ಸಂಜೆ ದೂಡಿ
ಕಾಯುತಿಹೆ ಪ್ರತಿ ದಿನವು
ನೆನಪೆಂಬ ಜಿನಿ ಮಳೆಗೆ
ಮನಸಿನೊಳ ಬಯಕೆ ರಾಡಿ
 
ಹಳೆಯ ಪುಟಗಳ ನಡುವೆ
ಹೊಸದೊಂದು ಅಧ್ಯಾಯ
ಈಗ ನಾ ಬರೆಯಲಾರೆ
ನಿನಗಾಗಿ ಹಂಬಲಿಸೋ
ಈ ಹುಚ್ಚು ಮನಸಿಗೆ
ನಾ ಬೇಡಿ ತೊಡಿಸಲಾರೆ
 
 
ISHWARA BHAT K
08.12.2004

ಆ ಬಾನಿನೂರಿಂದ ಚಂದಿರನು ಬಂದಿಹನು!! ಶುಕ್ರವಾರ, ಜನ 29 2010 

ಆ ಬಾನಿನೂರಿಂದ ಚಂದಿರನು ಬಂದಿಹನು
ಹೂ ಬೆಳಕ ತಂದಿಹನು ಚೆಲುವೆ
ಮುನಿಸು ಏತಕೆ ಗೆಳತಿ, ಒಡೆಯಬಾರದೆ ಮೌನ
ಈ ಬಗೆಯ ಹುಸಿಕೋಪ ತರವೆ?
 
ಬಗೆಬಗೆಯ ಕನಸಿರಲು ಹೂವಂಥ ಮನಸಿರಲು 
ಬಾಡಿತೇತಕೆ ಜಾಜಿ ಬಳ್ಳಿ 
ಮುನಿಸು ಚಿಗುರಿತು ಹೇಗೆ ಭಾವ ಮುದುಡಿತು ಹೇಗೆ ?
ಸಮರಸಕೆ ವಿರಸವೇ ಕೊಳ್ಳಿ
 
ಈಗ ಚಂದಿರನಿಲ್ಲ  ಮೋಡ ಮುಸುಕಿದೆಯಲ್ಲ
ತಂಗಾಳಿಯೇಕಿನ್ನು ಬರದು?
ಒಮ್ಮೆ ಬಂದರೆ ಸಾಕು ಮುಗಿಲನಾಚೆಗೆ ನೂಕು
ಈ ಬಾನು ಎಷ್ಟೊಂದು ಹಿರಿದು ?
 
ಹುಣ್ಣಿಮೆಯ ಬೆಳಕಿಗೆ ತಂಗಾಳಿ ಅಲೆಅಲೆಗೆ 
ಕಾದಿರುವೆ ಕನಸ ಹಾಗೆ 
ಯಾಕೆ ಈ ತರ ಹಗಲು ಬರಿಯ ಶಾಖದ ಒಡಲು
ಕಾಯುವೆನು ನಿನ್ನ ಹೂ ನಗೆಗೆ.
 
 
ISHWARA BHAT K

ಮುಂದಿನ ಪುಟ »